Friday, 4 September 2015

4} ಮಳೆರಾಜನ ಹಾಡು

4. ಮಳೆರಾಜನ ಹಾಡು
                        - ಜನಪದ ಸಾಹಿತ್ಯ

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ |
ಲೋಕ ತಲ್ಲಣಿಸುತಾವೋ
ಬೇಕಿಲ್ಲಾದಿದ್ದರೆ  ಬೆಂಕಿಯ ಮಳೆ ಸುರಿದು |
ಉರಿಸಿ ಕೊಲ್ಲಲುಬಾರದೇ!! ||

ಹೊಟ್ಟೆಗೆ ಅನ್ನ ಇಲ್ಲದಲೇ  |
ನಡೆದರೆ ಜೋಲಿ ಹೊಡೆಯುತ್ತಲೇ ||
ಪಟ್ಟದಾನೆಯಂಥ ಸ್ತ್ರೀಯರು ಸೊರಗಿ |
ಸೀರೆ ನಿಲ್ಲದಿಲ್ಲ ಸೊಂಟಾದಲೇ ||

ಹಸುಗೂಸು ಹಸಿವಿಗೆ ತಾಳದಲೆ| 
ಅಳುತವೆ ರೊಟ್ಟಿ ಕೇಳಿ ಕೇಳೀ || 
ಹಡೆದ ಬಾಣಂತಿಗೆ  ಅನ್ನಾವಿಲ್ಲದಲೆ |
ಏರುತಾವೆ   ಮುಂಗೈಗೆ ಬಳೀ||

ಯಾವ ಕಡೆ ಹೋಗಾನ ವನವಾಸಾ
ಯಾವಾ ನದಿ ಇಲ್ಲಿ ಯಾವ ದೇಶ
ಎಲ್ಲಿ ನೋಡಿದರು ಒಂದೇ ಶಬ್ದ
ದಯಮಾಡೋ ನೀ ಜಗದೀಶಾ

ಒಕ್ಕಲು  ಮಕ್ಕಳಂತೇ |
ಅವರಿನ್ನು ಮಕ್ಕಳನು ಮಾರ್ಯುಂಡರೋ ||
ಮಕ್ಕಳನು ಮಾರ್ಯುಂಡು ದುಃಖವನು ಮಾಡುತಾರೆ  |
ಮುಕ್ಕಣ್ಣ ಮಳೆ ಕರುಣಿಸೋ ||

ಬಣ್ಣದ ಗುಬ್ಬ್ಯಾರು ಮಳೆರಾಜಾ|ಅವರು|
ಮಣ್ಣಾಗಿ ಹೋದರು ಮಳೆರಾಜ|
ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು
ಅನ್ಯದ ದಿನ ಬಂದು ಮಳೆರಾಜಾ|

ಒಕ್ಕಲಗೇರ್ಯಾಗ ಮಳೆರಾಜ
ಮಕ್ಕಳ ಮಾರ್ಯಾರು ಮಳೆರಾಜ
ಮಕ್ಕಳ ಮಾರಿ ರೊಕ್ಕ ಹಿಡಕೊಂಡು
ಭತ್ತಂತ ತಿರುಗ್ಯಾರು ಮಳೆರಾಜ||

ಸೊಲಗಿ ಹಿಟ್ಟಿನಾಗ ಮಳೆರಾಜ
ಸುಣ್ಣಾನ್ನು ಕುಡಿಸ್ಯರು ಮಳೆರಾಜ
ಹಸ್ದು ಬಂದು ಕೇರಿ ಗಪಗಪಾನೆ ತಿಂದು
ಒದ್ದಾಡಿ ಸತ್ತಾರು ಮಳೆರಾಜ||

ಗಿದ್ನ ಅಕ್ಕ್ಯಾಗ ಮಳೆರಾಜ
ಅಪುವನ್ನು ಕುಡಿಸ್ಯಾರು ಮಳೆರಾಜ
ಸಣ್ಣ ಕೂಸಿಗೀ ಮನ್ನಿಸಿ ಉಣಿಸ್ಯಾರು ಅವು
ಕಣ್ಣನೆ ಮುಚ್ಚಾವು ಮಳೆರಾಜ||

ಗಂಡುಳ್ಳ ಬಾಲೇರು ಮಳೆರಾಜ
ಭಿಕ್ಷಕ್ಕೆ ಹೊರಟಾರು ಮಳೆರಾಜ
ಗಂಡುಳ್ಳ ಬಾಲೇರು ಭಿಕ್ಷಾಕ್ಕೆ ಹೊರಟಾರು
ಅನ್ಯದ ದಿನಬಂದು ಮಳೆರಾಜ||

No comments:

Post a Comment