'ರೈಲ್ವೆ ನಿಲ್ದಾಣದಲ್ಲಿ ' ಕಾವ್ಯದ ಆಶಯ

           2. ರೈಲ್ವೇ ನಿಲ್ದಾಣದಲ್ಲಿ

                -ಕೆ. ಎಸ್ ನರಸಿಂಹಸ್ವಾಮಿ 

  ಆಶಯ  : 
                ತೊಟ್ಟೀಲು ಹೊತ್ಕೊಂಡು ತೌರ್ಬಣ ಉಟ್ಕೊಂಡು
                ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು ತವರೂರ
                ತಿಟ್ಹತ್ತಿ ತಿರುಗಿ ನೋಡ್ಯಾಳೊ

         ಭಾರತ ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿ ಭಾವನಾತ್ಮಕವಾಗಿ ದೇಶ. ಕುಟುಂಬದ ಪ್ರಧಾನ ಪಾತ್ರ ಹೆಣ್ಣು. ಈ ದೇಶದ ಹೆಣ್ಣಿಗೆ ಎರಡು ಜನ್ಮ. ಒಂದು ತೌರೂರಲ್ಲಿ , ಮತ್ತೊಂದು ಗಂಡನ ಊರಲ್ಲಿ. ಇದು ಎಂದಿನಿಂದಲೋ ಬೆಳೆದು ಬಂದ ಕಟ್ಟು. ನಾವು ಇದನ್ನೇ ಸಂಸ್ಕೃತಿ ಎಂಬ ಹೆಸರಿನಿಂದ ಅವಳ ಸಾರ್ಥಕ ಬದುಕೆಂದು ಹಾಡಿ ಹೊಗಳುತ್ತೇವೆ.

         ಎಲ್ಲ ಮಕ್ಕಳಂತೆ ಬಾಲ್ಯ ಕಳೆದ ಹೆಣ್ಣು, ಯೌವನಕ್ಕೆ ಬಂದ ತಕ್ಷಣ ಮದುವೆಗೆ ಸಿದ್ಧಗೊಳ್ಳಬೇಕು. ಯಾವುದೋ ಕಾಣದ ಅಪರಿಚಿತ ಜನರ ಪ್ರಪಂಚಕ್ಕೆ ಕಾಲಿಟ್ಟು, ಬದುಕಿನ ಒಲೆ ಹಚ್ಚಬೇಕು. ಆ ಉರಿಯಲ್ಲಿ ಬೇಯಲು ಸಿದ್ಧಳಾಗಬೇಕು.

      ಚೊಚ್ಚಲ ಹೆರಿಗೆಗೆ ತವರೂರಿಗೆ ಬಂದು,ಸೀಮಂತ, ಬಾಣಂತನಗಳನ್ನು ಮುಗಿಸಿ, ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ , ಒಡಹುಟ್ಟಿದವರ, ನೆಂಟರಿಷ್ಟರ ಆಪ್ತತೆಯ ಅಪ್ಪುಗೆಯಿಂದ ಜಾರಿ, ತನ್ನ ಮಗುವಿನೊಂದಿಗೆ ಹೊರಡಲು 'ತಾಯಿ ಮನೆಗೆ' ಬಂದು ತವರಿಗೆ ಹೋಗುವ ಮಗಳನ್ನು ಪ್ರತಿ ಬಾರಿಯೂ, ಬದುಕಿರುವವರೆಗೂ ಹೃದಯದಿಂದ ಕಳುಹಿಸುವವಳು ತಾಯಿ ಮಾತ್ರ.

          'ರೈಲ್ವೆ ನಿಲ್ದಾಣದಲ್ಲಿ' ಕವಿತೆ ಪ್ರಯಾಣದ ಸಾಮಾನ್ಯ ವಿವರಗಳನ್ನು ಹಿತಮಾತುಗಳಿಂದ ಪ್ರಾರಂಭಿಸಿ , ರೈಲಿನ ದಡದಡ ಸದ್ದಿನ ಭೀಕರತೆಯನ್ನು ಧ್ವನಿಸುತ್ತದೆ. ಮಾತಿಗೆ ಮೀರಿದ ಭಾವ ತಾಯಿ-ಮಗಳ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ. ಇವರಿಬ್ಬರ ಸಂಬಂಧ, ಅಂತಹಕರಣದ ಅನುಬಂಧ ಜೊತೆ ಜೊತೆಯಾಗಿ ಅರಳುತ್ತಾ ಹೋಗುತ್ತದೆ. ಯಾತನಾಮಯವಾದ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ ಎದುರಾಗುವ ಭಯ, ಆತಂಕ, ದುಃಖ ದುಮ್ಮಾನಗಳಿಂದ ಕೂಡಿದ ಭವಿಷ್ಯದ ಬದುಕು, ರೈಲ್ವೆ ನಿಲ್ದಾಣದ ಪರಿಸರದೊಂದಿಗೆ ಬೆಸೆದುಕೊಂಡಿದೆ.

No comments:

Post a Comment