Friday, 18 September 2015

2} ರೈಲ್ವೆ ನಿಲ್ದಾಣದಲ್ಲಿ ಕವಿತೆಗೆ ಸಂಬಂಧಿಸಿದಂತೆ

           "ರೈಲ್ವೆ ನಿಲ್ದಾಣದಲ್ಲಿ"
                                - ಕೆ. ಎಸ್. ಎನ್
                'ರೈಲ್ವೆ ನಿಲ್ದಾಣದಲ್ಲಿ' ಕವಿತೆ ಪ್ರಯಾಣದ ಸಾಮಾನ್ಯ ವಿವರಗಳನ್ನು ಹಿತಮಾತುಗಳಿಂದ ಪ್ರಾರಂಭಿಸಿ , ರೈಲಿನ ದಡದಡ ಸದ್ದಿನ ಭೀಕರತೆಯನ್ನು ಧ್ವನಿಸುತ್ತದೆ. ಮಾತಿಗೆ ಮೀರಿದ ಭಾವ ತಾಯಿ-ಮಗಳ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ. ಇವರಿಬ್ಬರ ಸಂಬಂಧ, ಅಂತಹಕರಣದ ಅನುಬಂಧ ಜೊತೆ ಜೊತೆಯಾಗಿ ಅರಳುತ್ತಾ ಹೋಗುತ್ತದೆ. ಯಾತನಾಮಯವಾದ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ ಎದುರಾಗುವ ಭಯ, ಆತಂಕ, ದುಃಖ ದುಮ್ಮಾನಗಳಿಂದ ಕೂಡಿದ ಭವಿಷ್ಯದ ಬದುಕು, ರೈಲ್ವೆ ನಿಲ್ದಾಣದ ಪರಿಸರದೊಂದಿಗೆ ಬೆಸೆದುಕೊಂಡಿದೆ.

          ಎಲ್ಲ ಮಕ್ಕಳಂತೆ ಬಾಲ್ಯ ಕಳೆದ ಹೆಣ್ಣು, ಯೌವನಕ್ಕೆ ಬಂದ ತಕ್ಷಣ ಮದುವೆಗೆ ಸಿದ್ಧಗೊಳ್ಳಬೇಕು. ಯಾವುದೋ ಕಾಣದ ಅಪರಿಚಿತ ಜನರ ಪ್ರಪಂಚಕ್ಕೆ ಕಾಲಿಟ್ಟು, ಬದುಕಿನ ಒಲೆ ಹಚ್ಚಬೇಕು. ಆ ಉರಿಯಲ್ಲಿ ಬೇಯಲು ಸಿದ್ಧಳಾಗಬೇಕು.

      ಚೊಚ್ಚಲ ಹೆರಿಗೆಗೆ ತವರೂರಿಗೆ ಬಂದು,ಸೀಮಂತ, ಬಾಣಂತನಗಳನ್ನು ಮುಗಿಸಿ, ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ , ಒಡಹುಟ್ಟಿದವರ, ನೆಂಟರಿಷ್ಟರ ಆಪ್ತತೆಯ ಅಪ್ಪುಗೆಯಿಂದ ಜಾರಿ, ತನ್ನ ಮಗುವಿನೊಂದಿಗೆ ಹೊರಡಲು 'ತಾಯಿ ಮನೆಗೆ' ಬಂದು ತವರಿಗೆ ಹೋಗುವ ಮಗಳನ್ನು ಪ್ರತಿ ಬಾರಿಯೂ, ಬದುಕಿರುವವರೆಗೂ ಹೃದಯದಿಂದ ಕಳುಹಿಸುವವಳು ತಾಯಿ ಮಾತ್ರ.

                   ಕುಟುಂಬದ ಪ್ರಧಾನ ಪಾತ್ರ ಹೆಣ್ಣು. ಈ ದೇಶದ ಹೆಣ್ಣಿಗೆ ಎರಡು ಜನ್ಮ. ಒಂದು ತೌರೂರಲ್ಲಿ , ಮತ್ತೊಂದು ಗಂಡನ ಊರಲ್ಲಿ. ಇದು ಎಂದಿನಿಂದಲೋ ಬೆಳೆದು ಬಂದ ಕಟ್ಟು. ನಾವು ಇದನ್ನೇ ಸಂಸ್ಕೃತಿ ಎಂಬ ಹೆಸರಿನಿಂದ ಅವಳ ಸಾರ್ಥಕ ಬದುಕೆಂದು ಹಾಡಿ ಹೊಗಳುತ್ತೇವೆ.

              ಮದುವೆಯಾದ ಹೆಣ್ಣು ತೌರೂರ ಬಿಟ್ಟು ಗಂಡನ ಮನೆಗೆ ಹೋಗಲೇಬೇಕು. ತೌರೂರಲ್ಲಿ ಸ್ವತಂತ್ರವಾಗಿ ಬೆಳೆದು ಬಂದಿರುವ ಹೆಣ್ಣು ಅಪರಿಚಿತರ ಮನೆಗೆ ಕಾಲಿಡಲೇಬೇಕು. ಗಂಡನಿಗೆ ಪತ್ನಿಯಾಗಿ, ಅತ್ತೆಗೆ ಸೊಸೆಯಾಗಿ ಸಂಸಾರ ಮಾಡಲು ಮನ್ನಡೆಯಬೇಕಾಗುತ್ತದೆ. ತುಂಬು ಹರೆಯದ ಹೆಣ್ಣು ಹೊಸತರಲ್ಲಿ ಮದುವೆಯಾದ ಮೇಲೆ ಸಂಸಾರ ಮಾಡಲು ಕಾಲಿಟ್ಟಾಗ ಪ್ರತಿ ಬಾರಿಯೂ ಎಡವುತ್ತಾಳೆ, ಪ್ರತಿಯೊಂದು ಸಣ್ಣ ಪುಟ್ಟ ಕೆಲಸ ಕಾರ್ಯಗಳಲ್ಲೂ ತಪ್ಪುತ್ತಾಳೆ. ಕೆಲವೊಂದು ಆಕಸ್ಮಿಕ ಸಂದರ್ಭಗಳಿಗೂ ತುತ್ತಾಗುತ್ತಾಳೆ.

              ಗಂಡನ ಮನೆಯಲ್ಲಿ ತನ್ನವರು ಯಾರೂ ಇಲ್ಲವೆಂಬ ಕೊರಗು ಹೆಣ್ಣಿಗೆ ಕಾಡುತ್ತಲೇ ಇರುತ್ತದೆ. ದೇಹವೆಲ್ಲಾ ಗಂಡನ ಮನೆಯಲ್ಲೇ ಇದ್ದರೂ ಮನಸ್ಸೆಲ್ಲಾ ತೌರೂರಲ್ಲಿ, ತಾಯಿಯ ಮೇಲಿರುತ್ತದೆ. ಏನನ್ನೊ ಮಾಡುತ್ತ ಏನೆಲ್ಲಾ ಯೋಚನೆಗಳನ್ನು ಮಾಡುತ್ತಿರುತ್ತಾಳೆ. ತಾಯಿಯ ಮನೆಯಲ್ಲಿ ಯಾವುದೇ ನಿರ್ಭಂಧನೆಗಳಿಲ್ಲದೆ ಸ್ವತಂತ್ರವಾಗಿ ಹಕ್ಕಿಯಂತೆ ಹಾರುತ್ತ ಬೆಳೆದಿರುವಂತಹ ಹೆಣ್ಣಗೆ ಇಂದು ವಯಸ್ಸಿನ ಅಭಾವದಿಂದ ಗಂಡನ ಮನೆಯಲ್ಲಿ ನೀತಿ ನಿಯಮಗಳಿಗೆ ತಕ್ಕಂತೆ ಚಾಚೂ ತಪ್ಪದೆ ನಡೆದುಕೊಳ್ಳಲು ಕಷ್ಟವಾಗುತ್ತದೆ. ಪ್ರತಿ ಘಳಿಗೆಯೂ ಶೋಕ ಪಡುತ್ತಲಿರುತ್ತಾಳೆ. ತಾಯಿಯ ನೆನೆ-ನೆನೆದು ಕಣ್ಣೀರು ಸುರಿಸುತ್ತಿರುತ್ತಾಳೆ.

                 ಹೌದು, ಗಂಡನ ಮನೆಯಲ್ಲಿ ಎಷ್ಟೇ ಶ್ರೀಮಂತಿಕೆಯಿದ್ದರೂ ಹೆಣ್ಣಿಗೆ ತವರು ಮನೆಯಲ್ಲಿ ಸಿಗುವಂತಹ ಪ್ರೀತಿ, ಮಮತೆ, ವಾತ್ಸಲ್ಯ , ಅಕ್ಕರೆ ಬೇರೆಲ್ಲೂ ಸಿಗದು. ಒಂದು ವೇಳೆ ಗಂಡನ ಮನೆಯಲ್ಲಿ ಅತೀ ಜಾಗೂರಕತೆಯಿಂದ ನೋಡಿಕೊಂಡರೂ ತಾಯಿಗಿಂತ ಹೆಚ್ಚು ಪ್ರೀತಿ, ಕಾಳಜಿ ತೋರಿದರೂ ಆ ಹೆಣ್ಣಿಗೆ ಅದೆಲ್ಲ ಒಣ ಆಡಂಬರದಂತೆ ಕಾಣುತ್ತದೆ. ನಿಜವಾದ ಪ್ರೀತಿ ಸಿಗದಂತೆ ತೋರುತ್ತದೆ.

        ಒಂದು ರೀತಿಯಲ್ಲಿ ಹೇಳುವುದಾದರೆ ಹೆಣ್ಣು ಮದುವೆಯಾದ ಹೊಸತರಿಂದ ಹಿಡಿದು ಕೊನೆಯ ಘಳಿಗೆಯವರೆಗೂ ಶೋಕ ಪಡುತ್ತಲೇ ಇರುತ್ತಾಳೆ. ಆ ಹೆಣ್ಣು ತನ್ನ ಜೀವನದಲ್ಲಿ ಸಂತೋಷದಿಂದ ಇಹಳು ಎಂದರೆ ಅದು ತನ್ನ ಮಗ/ಮಗಳಿಂದ ಮಾತ್ರ ಸಾಧ್ಯ. ಮಗುವನ್ನು ಮುದ್ದು ಮಾಡಿ ಕಾಳಜಿಯಿಂದ ನೋಡಿಕೊಳ್ಳುವಾಗ ಜಗವನ್ನೇ ಮರೆಯುತ್ತಾಳೆ. ತನ್ನ ಮಗುವಿನ ಆರೈಕೆಯನ್ನೇ ಪ್ರಪಂಚವೆಂದು ತಿಳಿದು ತುಂಬಾ ಸಂತಸದಿಂದಿರುತ್ತಾಳೆ.

             'ಹೆಣ್ಣಿನ ಬದುಕು' ಏನೆಂಬುದು ಕಾಣುವ ಕಣ್ಣಿಗಿಂತ ಅನುಭವಿಸುವ ಮನಕ್ಕೇ ಅತೀ ಸೂಕ್ಷ್ಮವಾಗಿ ತಿಳಿದಿರುತ್ತದೆ. ತಾಯಿಗೆ ತನ್ನ ಮಗಳ ಜೀವನದ ಬಗ್ಗೆಯೇ ಚಿಂತೆಯಿರುತ್ತದೆ. ತಾಯಿಯ ತನ್ನರ್ಧ  ಜೀವನವನ್ನು ತನ್ನ ಕುಟುಂಬ, ಸಂದಂಧಿಕರು ಸಂತಸದಿಂದಿರಲೆಂದೇ ಹಾರೈಸುತ್ತಾಳೆ. ಅದರಲ್ಲೂ ಹೆಚ್ಚಾಗಿ ಮಗಳಿಗೆ ತನ್ನ ಮನದಲ್ಲಿ ಶ್ರೇಷ್ಠ ಸ್ಥಾನವನ್ನು ಕೊಟ್ಟಿರುತ್ತಾಳೆ. ಮಗಳನ್ನು ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು, ಗಂಡನ ಜೊತೆ ಹೇಗಿರಬೇಕು, ಅತ್ತೆ - ಮಾವಂದಿರ ಜೊತೆ ಹೇಗೆ ನಡೆದುಕೊಳ್ಳಬೇಕು, ದುಃಖವಾದರೂ ಹೇಗೆ ಸಹಿಸಿಕೊಂಡಿರಬೇಕು, ಗಂಡನ ಮನೆಯಲ್ಲಿ ತನ್ನ ಕರ್ತವ್ಯಗಳು ಏನಿರುತ್ತವೆ ಎಂಬುದರ ಅರಿವು ಮನವರಿಕೆ ಮಾಡಿಕೊಡುತ್ತಾಳೆ. ಅತ್ತೆಯೊಂದಿಗಿನ ಸಂಬಂಧ ತನಗಿಂತಲೂ ಉತ್ತಮವಾಗಿರಲೆಂದು ಬಯಸುತ್ತಾಳೆ.

           ಮಗಳಿಗೆ ತಾಯಿಯ ಬಗ್ಗೆಯೇ ಚಿಂತೆ, ತನ್ನ ತವರು ಮನೆಯ ಚಿಂತೆಯೇ ಅಧಿಕವಾಗಿರುತ್ತದೆ. ಪ್ರೀತಿ - ಪಾತ್ರರ ನೆನಪುಗಳು ಬೆನ್ನು ಹತ್ತಿದ ಬೇತಾಳನಂತೆ ಕಾಡಿ ಮನಸ್ಸನ್ನು ಮತ್ತಷ್ಟು ಶೋಕ ಪಡುವಂತೆ ಮಾಡುತ್ತವೆ. ತವರೂರಿಗೆ ಪ್ರತಿ ಬಾರಿಯೂ ಹೋಗುವಾಗ ಹೆಣ್ಣಿಗೆ ಸ್ವರ್ಗಕ್ಕಿಂತಲೂ ಮಿಗಿಲಾದ ಸ್ಥಾನಕ್ಕೆ ಹೋಗುತ್ತಿರುವೆನೆಂಬಂತೆ ಭಾಸವಾಗುತ್ತದೆ. ಅವಳಿಗಾಗುವ ಸಂತಸಕ್ಕೆ ಪಾರವೇ ಇಲ್ಲದಂತಾಗುತ್ತದೆ. ಹಾಗೆಯೇ, ತವರು ಮನೆಯಲ್ಲಿ ಬಂದುಳಿದು ಕೆಲವು ದಿನಗಳ ಕಾಲ ಸಂತಸದಿಂದ ಕಳೆದು ಮರಳಿ ಗಂಡನ ಮನೆಗೆ ಹೋಗುವಂತಹ ಘಳಿಗೆಯು ಬಂದಂತೆಯೇ, ತಲೆಯ ಮೇಲೆ ಬೆಟ್ಟ ಬಿದ್ದಂತೆಯೆ ಕುಳಿತುಕೊಳ್ಳುತ್ತಾಳೆ. ದುಃಖವು ಉಕ್ಕುಕ್ಕಿ ಬರುತ್ತಿರುತ್ತದೆ.

         ಹೇಗೋ, ತವರೂರಲ್ಲಿ ಕೆಲವು ದಿನಗಳು ಕಳೆದು ಗಂಡನ ಮನೆಗೆ ಹೊರಡಲು ಸಿದ್ಧಳಾಗುತ್ತಾಳೆ. ಕಾಲುಗಳು ತವರು ಮನೆ ಬಿಟ್ಟು ಹೋಗುದಂತೆ ಭಾಸವಾಗುತ್ತಿರುತ್ತದೆ. ಇರಿಸು- ಮುರಿಸು ಮನಸ್ಸಿನಿಂದ ಗಟ್ಟಿ ಮನಸ್ಸು ಮಾಡಿ ಹೊರಟರು ಯಾವುದೋ ಭ್ರಮಾ ಲೋಕದಲ್ಲಿರುತ್ತಾಳೆ. ಏನೋ ಕಳೆದುಕೊಂಡಿರುವಂತೆ ಯೋಚಿಸುತ್ತಿರುತ್ತಾಳೆ, ಏನನ್ನೋ ನೆನೆಯುತ್ತ ಕುಳಿತುಕೊಂಡಿರುತ್ತಾಳೆ. ತನ್ನ ಮೇಲೆ ಸಂಪೂರ್ಣ ಪ್ರಜ್ಞೆಯನ್ನು ತಪ್ಪಿದಂತಿರುತ್ತಾಳೆ. ಕಣ್ಣಲ್ಲಿ ಕಂಬನಿಗಳು ಬರುತ್ತಲಿರುತ್ತಿರುತ್ತವೆ. ಮೈಯೆಲ್ಲ ಬಿಸಿಯೇರಿರುತ್ತದೆ. ತಾಯಿಯೂ ಅಷ್ಟೇ ದುಃಖದಿಂದ ಮಗಳನ್ನು ಕಳುಹಿಸಿಕೊಡುತ್ತಾಳೆ.ಕೊನೆಯಲ್ಲಿ ಊರಿಗೆ ಕಳುಹಿಸುವ ಸಂದರ್ಭದಲ್ಲಿ ಮಗಳಿಗೆ ರೈಲಿನಲ್ಲಿ ಹೋಗುವಾಗ ಜೋಪಾನ ಎಚ್ಚರದಿಂದಿರು ಎಂದು ಕಾಳಜಿಯ ಮಾತುಗಳನ್ನೇಳುತಾಳೆ. ಮಗಳು ಸಹ ಅಷ್ಟೇ ಅಕ್ಕರೆಯಿಂದ ಹೋಗಮ್ಮ , ಸಾಕು ಮುಂದೆ ಬರಬೇಡಮ್ಮ ಇಲ್ಲಿಂದಲೇ ಕೈ ಮುಗಿಯುವೆನು; ನೀನು ಅಲ್ಲಿಂದಲೇ ಶುಭ ಹಾರೈಸಮ್ಮ ಎಂದು ಕೇಳುಕೊಳ್ಳುತ್ತಾಳೆ. ರೈಲಿನ ಹೆಗ್ಗಾಲಿಗರುಳಿ ದಡದಡ ಎಂಬ ಸದ್ದಿನ ಶಬ್ದವು ತಾಯಿ-ಮಗಳ ಮನದಲ್ಲಿ ಗುಡುಗಿದಂತೆ ಮನ ತಳಮಳಿಸುವಂತೆ ಮಾಡುತ್ತದೆ. ಈ ಟಿಪ್ಪಣಿಯು 'ರೈಲ್ವೆ ನಿಲ್ದಾಣದಲ್ಲಿ' ಕವಿತೆಯಲ್ಲಿ ತಾಯಿ ಮಗಳ ಸಂಭಾಷಣೆಯ ಮೂಲಕ 'ಹೆಣ್ಣಿನ ಬದುಕು' ಅನಾವರಣಗೊಂಡಿರುವ ಬಗೆಯನ್ನು ವಿವರಿಸುತ್ತದೆ.

No comments:

Post a Comment