'ಜಡೆ' ಕಾವ್ಯದ ಆಶಯ

                    3. ಜಡೆ
                        - ಜಿ.ಎಸ್.ಶಿವರುದ್ರಪ್ಪ 

   ಆಶಯ :
               
               ಹೆಣ್ಣಿನ ಜಡೆ ಸಂಪ್ರದಾಯ, ಪರಂಪರೆಯ, ಸೌಂದರ್ಯದ ಪ್ರತೀಕ.

                ಮಹಿಳೆಯ ಹಲವು ತೆರನಾದ ಜಡೆಗಳನ್ನು ತಿಳಿ ಹಾಸ್ಯದಲ್ಲಿ ಗುರುತಿಸುವ ಕವಿಮನಸ್ಸು ಕೊನೆಗೆ ಪ್ರಕೃತಿದೇವಿಯ ಸುಂದರವಾದ ಜಡೆಯನ್ನು ವರ್ಣಿಸುತ್ತದೆ. ಅಂದರೆ ಮೊದಲು ಮಾನವ ಸಮಾಜದ ಸೃಜನ ಶಕ್ತಿಯಿಂದ ಹುಟ್ಟಿಕೊಳ್ಳುವ ಜಡೆ, ಕಡೆಗೆ ಪ್ರಕೃತಿಲೀಲೆಯಿಂದ ಉದ್ಭವಿಸಿ ಮಾನವನಿಗಿಂತ, ಪರಿಸರ ದೊಡ್ಡದು ಎಂಬ ಭವ್ಯತೆಯನ್ನು ಈ ಕವಿತೆ ಪ್ರತಿನಿಧಿಸುತ್ತದೆ. ಕವಿತೆಯ ಮೊದಲರ್ಧದಲ್ಲಿ ಜಡೆಯ ಮೂಲಕ ಆಕರ್ಷಕ ಹಾಸ್ಯವನ್ನು ತಂದರು ಸಮಾಜದ ಬಡತನ, ನೋವು ನಲಿವುಗಳನ್ನು ಕವಿ ಗಂಭೀರವಾಗಿ ಕಟ್ಟಿಕೊಡುತ್ತಾರೆ. ಬಾಲ್ಯದಲ್ಲಿ 'ಜಡೆ ಎಳೆವ' ತುಂಟಾಟ, ಕಡೆಗೆ ದ್ರೌಪದಿ ಸೀತೆಯರ ಜಡೆಗೆ ಕೈ ಹಚ್ಚಿದ ಭೀಕರತೆಯನ್ನು ಚಿತ್ರಿಸುತ್ತದೆ. ಇಲ್ಲಿ ಅಂದಿನಿಂದ ಇಂದಿನವರೆಗೂ 'ಸ್ತ್ರೀಜಡೆ'ಯನ್ನು ಅನಾವರಣಗೊಳಿಸುವುದು ಶಕ್ತಿಯ ಸಂಕೇತವಾಗಿ ಪ್ರತಿಬಿಂಬಿತವಾಗಿದೆ.

            ದ್ವಿತೀಯಾರ್ಧದಲ್ಲಿ ಕಾಲ ಮತ್ತು ಪ್ರಕೃತಿಯ ವೈವಿಧ್ಯಮಯ ವೈಪರೀತ್ಯಗಳನ್ನು, ಕತ್ತಲು, ಪಕ್ಷಿ, ಹೂವು, ನದಿ, ಗಿರಿಶ್ರೇಣಿ, ಕಾಡಿನ ಹಸಿರು, ಮಳೆ, ಪ್ರವಾಹಗಳ ಮೂಲಕ ಉಪಮಿಸಿ, ವಿಶ್ವ ವ್ಯಾಪಕತೆಗೊಳಿಸುತ್ತ ಶಕ್ತಿದೇವಿಯ ಜಡೆ ಹೆಣೆಯುವ ಕವಿಗೆ ಆ ಜಗತ್ ಸ್ವರೂಪಿಣಿಯಾದ ಮಹಾಶಕ್ತಿಯ ಮುಖ ಮಾತ್ರ ಕಾಣುವುದಿಲ್ಲ ಎಂಬ ಸೋಜಿಗದೊಂದಿಗೆ, ಅಚ್ಚರಿಯೊಂದಿಗೆ ಕವಿತೆ ಅಂತ್ಯಗೊಳ್ಳುವುದೇ ಅದ್ಭುತ.

No comments:

Post a Comment