3 . ಜಡೆ
- ಜಿ.ಎಸ್.ಶಿವರುದ್ರಪ್ಪ
ಜಡೆ ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವ ಜಡೆ. ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು ಅತ್ತಿತ್ತ ಹರಿದ ಜಡೆ ! ಚೇಳ್ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ ! ಎಣ್ಣೆ ಕಾಣದ ಹಿಣಿಲು ಹಿಣಿಲಾಗಿ ಹೆಣೆದ ಜಡೆ ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟು ಜಡೆ ! ಅಕ್ಕ ತಂಗಿಯ ಮುಡಿಯ ಹಿಡಿದು ನಾನೆಳೆದಂಥ ಮಲ್ಲಿಗೆಯ ಕಂಪು ಜಡೆ ಕೇದಗೆಯ ಹೆಣೆದ ಜಡೆ, ಮಾತೃಮಮತಾವೃಕ್ಷ ಬಿಟ್ಟ ಬೀಳಲಿನಂತೆ ಹರಡಿರುವ ತಾಯ ಜಡೆ ! “ಕುರುಕುಲ ಜೀವಾಕರ್ಷಣ ಪರಿಣತ”-ಆ ಪಾಂಚಾಲಿಯ ಜಡೆ ! ಸೀತೆಯ ಕಣ್ಣೀರೊಳು ಮಿಂದ ಜಡೆ ಓ ಓ ಈ ಜಡೆಗೆಲ್ಲಿ ಕಡೆ ! * * * ಸಂಜೆಯಲಿ ಹಗಲು ಕೆದರುವ ಕತ್ತಲೆಯ ಕಪ್ಪು ಜಡೆ ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ ಬೆಳಕು ಜಡೆ ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತ ಬರುವಂಥ ಬೆಳ್ಳಕ್ಕಿಗಳ ಜಡೆ ಕ್ರೌಂಚಗಳ ಜಡೆ ಮರ ಮರದಿ ಬಳುಕುತಿಹ ಹೂಬಿಟ್ಟ ಬಳ್ಳಿ ಜಡೆ ಕಾಡು ಬಯಲಿನ ಹಸುರು ಹಸರದಲಿ ಹರಿ ಹರಿದು ಮುನ್ನಡೆವ ಹೊಳೆಯ ಜಡೆ ! ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ ! ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂದ ಕಾನನದ ಹಸುರು ಜಡೆ ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ ! ಮುಂಗಾರು ಮೋಡಗಳು ದಿಕ್ಕುದಿಕ್ಕಿಗೆ ಬಿಚ್ಚಿ ಹರಡಿರುವ ಮಳೆಯ ಜಡೆ ! ಚಂದ್ರಚೂಡನ ವ್ಯೋಮಕೇಶನ ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ ಗಾನಗಳ ಕಾವ್ಯಗಳ ಶಿಲ್ಪಗಳ ಕಲೆಯ ಜಡೆ ಎಲ್ಲವೂ ರಮ್ಯವೆಲ್ಲ ! ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ !
No comments:
Post a Comment