Monday, 20 July 2015

1} . ಗೊಬ್ಬರ ಕಾವ್ಯ

                  1. ಗೊಬ್ಬರ 
                                      - ಕುವೆಂಪು

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ? ಹಾ ಕಡುಕಷ್ಟ! ಕಲಿಕಾಲಕೇನೇನು ಬಂದಪುದೊ? ಸಾಲದೇಂ ಪ್ರಲಯಕಿದೆ ಪೀಠಿಕೆ? ಇನ್ನೇನು ಕಾರಣಂ ಬೇಕಯ್ಯ ನಿನಗೆ, ತಾಂಡವ ಮೂರ್ತಿ, ಕಲ್ಕ್ಯಾವತಾರವನ್ನೆತ್ತಿಬರೆ? ಇದಕಿಂತ ಧರ್ಮವಧೆ ಬೇರುಂಟೆ? ನಿರ್ಮಲ ಸರಸ್ವತಿಯ ವೀಣೆಯಂ ಶೂದ್ರಂ ಕಸಿದುಕೊಂಡು ಗೊಬ್ಬರದ ಗುಂಡಿಯನ್ನಗೆಯೆ ಗುದ್ದಲಿಯ ಮಾಡಿಹನಲ್ಲ! ಶಿವನೆ, ಭೈರವನಾಗಿ ಬಂದು ಹಣೆಗಣ್ಣಿನಿಂ ಕಿಡಿಗೆದರಿ ಬೂದಿ ಮಾಡದೆ ಸುಮ್ಮನಿಹೆಯಲ್ಲ!”

“ಕವಿತೆ, ಭೂಪಾಲರರಮನೆಯಲ್ಲಿ ಕೈ ಕೆಸರು ಮಾಡಿಕೊಳದೆಯೆ ಮೊಸರನುಣುತಿರ್ದ ಪಂಡಿತರ ದಿವ್ಯ ಜಿಹ್ವಾ ಲಸದ್ರಂಗದಲಿ ಕುಣಿದಾಡಿ ಸುಳಿದಾಡಿ ನಲಿದಾಡಿದಾ ನೀನು, ಹಾ! ಇಂದು ಕೊಳೆತು ನಾರುವ ರೈತನೊಡಗೂಡಿ ಒದ್ದಾಡಿ, ಗಂಧ ಪುನುಗು ಜವಾಜಿ ಕಸ್ತೂರಿಗಳನುಳಿದು ಸೆಗಣಿಗಂಪಘ್ರಾಣಿಪಂತಾಯ್ತೆ? ಕೋಕಿಲೆಯ ಸ್ತೋತ್ರಗೈದಾ ನೀನು ಪಾಳುಗೂಬೆಯ ಕುರಿತು ಪಾಡುವಂತಾಯ್ತೆ? ಪೆರೆನೊಸಲು, ಕೆಂದುಟಿ, ಕೆನ್ನೆ, ಚಂದ್ರಾನನಂ, ಕಮಲನಯನಂ, ಲಸನ್ನೀಲ ಕುಂತಳಂ, ಚಾರು ವಕ್ಷಸ್ಥಳಂ, ನುಣ್ಪು ತೊಡೆ, ಜಘನಂ ನಿತಂಬಂಗಳಲಿ, ಕೆಂದಾವರೆಯ ಮೆಲ್ಲಡಿಗಳಲಿ ವಿಹರಿಸಿದ ಕಾವ್ಯಪಂಕಜೆಯೆ, ನಿನಗಿಂದು ಕೆಸರೆ ಮನೆಯಾಗಿದೆಯೆ? ನಂದನಂ ಮರುಭೂಮಿಯದುದೇ? ರಣವೀರ ಪಾರ್ಥಿವರ ರಕ್ತತೃಷ್ಣೆಯ ಕರ್ಮಮಂ, ಖಡ್ಗಧನುಗಳಂ, ಬಾಣಪ್ರಯೋಗ ಕೌಶಲಮಂ, ಕಿರೀಟಾದಿ ವಸನ ಭೂಷಣ ತನುತ್ರ ಶಿರತ್ರ ವಿಭವಮಂ ವರ್ಣಿಸಿದ ನೀನಿಂದು ನೇಗಿಲಂ ಹಾರೆಯಂ ಮಣ್ಣಗೆವ ಕಜ್ಜಮಂ ನೆರೆ ವರ್ಣಿಪಂತಾಯ್ತೆ? ದುಷ್ಯಂತ ದಶರಥ ಶ್ರೀರಾಮನರ್ಜುನಂ ಕೌಶಿಕ ಪರಶುರಾಮ ಭೀಷ್ಮದ್ರೋಣಾದ್ಯರಂ ಬಣ್ಣಿಸಿದ ನೀನು-ಕರಿಸಿದ್ದ ಕಿಟ್ಟಯ್ಯರಂ, ದುರ್ದಮ ಕುರುಕ್ಷೆತ್ರಮಂ ಮೇಣ್ ಪುರಾಣದಾ ಲಂಕೆಯನ್ನುಳಿದು ಹಾ! ಒಂಟಿಕೊಪ್ಪಲಿನಾಚೆ ಬೋಡದ ಬೋರೆಯಂ, ಮಲೆನಾಡ ಕೊಂಪೆಯಾ ಕಾಡು ಮೇಡುಗಳಂ ಕುರಿತ್ತುಲಿವ ಗತಿಯಾಯ್ತೆ?”

“ಕಬ್ಬಿಲರು ಕಬ್ಬಿಗರು ತಾವೆನುತ್ತಬ್ಬರಿಸಿ ಬೊಬ್ಬಿರಿಯೆ ಕಬ್ಬವದುದೆ? ಗೊಬ್ಬರದ ಮೇಲೆ ಕಬ್ಬವಪ್ಪೊಡೆ ಗಂಡು ಗಬ್ಬವಾದಂತಲ್ತೆ? ಅಬ್ಬಬ್ಬ, ಕಲಿಕಾಲಕೇನದರಾಗುತದೆ!” “ಗೊಬ್ಬರವನಲ್ಲಗಳೆಯುವೆ ಏಕೆ ಮರದ ತುದಿ ನಲ್ಗಂಪುವೆತ್ತು ತಂಗಾಳಿಗೊಲೆಯುವ ಹೂವೆ? ಬೇರುಗಳಿಗಿಲ್ಲದಿರೆ ಗೊಬ್ಬರಂ, ಹೇಳೆನಗೆ, ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ ನೀಂ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು? ಹಳಿಯದಿರೊ; ಇಂದು ನಾಳೆಯೊ ನೀನು ಕೆಳಗುರುಳಿ ಗೊಬ್ಬರದೊಳೊಂದಾಗುವಾ ಮುಂದೆ ಕಾದಿಹುದು!”

“ಹಚ್ಚಿಕೊಳ್ಳಿರೊ ಹಚ್ಚಿಕೊಳ್ಳಿ ಪರಿಮಳಗಳಂ ಗಂಧ ಅತ್ತರು ಪುನುಗು ಕಸ್ತೂರಿ ಇತ್ಯಾದಿ ತರತರದ ಭೋಗಮಮ್! ಇನ್ನೇಸು ದಿನ ತಾನೆ ಹಚ್ಚಿಕೊಳ್ಳುವಿರದನು ನಾ ಕಣ್ಣಿನಲೆ ಕಾಂಬೆ! ನಾಮ ಮುದ್ರೆ ವಿಭೂತಿಗಳ ಬಳಿದುಕೊಂಬವರು ಕತ್ತೆಯಂದದಿ ಗದ್ದೆಯಲಿ ಗೆಯ್ದ ಮೈಬೆವರು ಸುರಿಸಿ ಗೊಬ್ಬರ ಮಣ್ಣು ಬಳಿದುಕೊಂಬರಿಗಿಂತ ಮೇಲೆಂಬ ಭಾವ ತಲೆಕೆಳಗಾಗಿ ಹೋಗುತಿದೆ! ನೇಗಿಲ ಕುಳಂ ದೊರೆಯ ಕತ್ತಿಯಂ ಕಿತ್ತೆಸೆದು, ಮುತ್ತಿನುಂಡೆಯ ಮುಡಿವ ಸಿರಿನೆತ್ತಿಯನ್ನುತ್ತು ಬತ್ತಮಂ ಬಿತ್ತಿ ಬೆಳೆಯುವ ಉತ್ತಮದ ಹೊತ್ತು ಹತ್ತಿರಕೆ ಹತ್ತಿರಕೆ ಬರುತಿರಿವುದೊತ್ತೊತ್ತಿ! ಗೊಬ್ಬರಂ ಸಿಂಹಾಸನಕ್ಕೇರಿದಾ ದಿನಂ ತನ್ನ ಹೊಗಳಿದ ಕಬ್ಬಿಲನ ಕಬ್ಬಿಗನ ಮಾಡಿ ಮೆರೆಯುವುದು! ಅಂದು ಗೊಬ್ಬರದ ಕಂಪೆಲ್ಲರ್ಗೆ ಪರಿಮಳದ್ರವ್ಯ ತಾನಾದಪುದು! ಏತಕೆನೆ, ಸಿರಿವೆರಸು ಶಕ್ತಿಯಿರೆ ಗೊಬ್ಬರವೆ ಪರಿಮಳಂ; ಇಲ್ಲದಿರೆ ಪುನುಗು ತಾನಾದೊಡಂ ಗೊಬ್ಬರಂ!   

No comments:

Post a Comment